1975 ರಲ್ಲಿ ಶುರುವಾದ ರಜನೀ ಸಿನಿಮಾಯಾನಕ್ಕೆ ಭರ್ತಿ 50 ವರ್ಷ ತುಂಬಿದೆ. ಈ 50 ವರ್ಷದ ಸಂಭ್ರಮಕ್ಕೆ ಉಡುಗೊರೆ ಎಂಬಂತೆ ಲೋಕೇಶ್ ಕನಕರಾಜ್ ನಿರ್ದೇಶನದ, ಕಲಾನಿಧಿ ಮಾರನ್ ನಿರ್ಮಾಣದ ಬಹುಕೋಟಿ ಚಿತ್ರ ಕೂಲೀ ತೆರೆ ಕಂಡಿದೆ.
ಒಬ್ಬ ಕಲಾವಿದ 50 ವರ್ಷ ನಾಯಕನಾಗೇ ಉಳಿಯುವುದಿದೆಯೆಲ್ಲಾ ಅದು ಅಚ್ಚರಿಯೇ ಸರಿ. ಅಣ್ಣಾವ್ರ ನಂತರ ಹೀಗೆ ಜೀವನದುದ್ದಕ್ಕೂ ಅದೇ ಚರಿಶ್ಮಾ ಉಳಿಸಿಕೊಂಡು ಬಂದ ಹೀರೋ ಎಂದರೆ ರಜನೀಕಾಂತ್ ಅವರೇ ಮೊದಲು ಕಣ್ಮುಂದೆ ಬರೋದು.
ತೆರೆಯ ಮೇಲೆ ಹೀರೋ ಆಗಿ ಮಿಂಚಿ, ಬಣ್ಣದ ತೆಗೆದ ನಂತರ ನಿಜ ಜೀವನದಲ್ಲಿ ಮೇಕಪ್ ಇಲ್ಲದೇ ಕಾಣಸಿಗುವ ಹೀರೋ ರಜನೀಕಾಂತ್. ವಯೋಸಹಜ ನ್ಯೂನ್ಯತೆ, ದೈಹಿಕ ಬದಲಾವಣೆಗಳನ್ನು ಮರೆ ಮಾಡಿಕೊಳ್ಳದೆ ಸಭೆ, ಸಮಾರಂಭಗಳ ವೇದಿಕೆಯೇರೋದು ಸೆಲೆಬ್ರಿಟಿಗಳಿಗೆ ಸುಲಭದ ಮಾತಲ್ಲ.
ಈಗಲೂ ಎಷ್ಟೋ ಮಂದಿಗೆ ಮೇಕಪ್ ಇರದೇ ಹೊರ ಬಂದರೆ, ವಿಗ್ ಇರದೇ ಜನರೆದುರು ಹೋದರೆ ತಮ್ಮ ಜನಪ್ರಿಯತೆ ಕುಸಿಯುವ ಭಯವಿದೆ, ಅಥವಾ ಜನರಿಗೆ ತಮ್ಮ ಬಗೆಗಿರುವ ಸೆಳೆತ ಕಡಿಮೆಯಾಗಬಹುದೇನೋ ಎಂಬ ಅಂಜಿಕೆ ಇದೆ. ತಾವು ಸದಾ ಸ್ಮಾರ್ಟ್ ಆಗಿ ಕಂಡರೆ ಮಾತ್ರ ಸ್ಟಾರ್ ವ್ಯಾಲ್ಯೂ ಎಂಬ ನಂಬಿಕೆ ಇದೆ. ಇದೆಲ್ಲಾ ಎಲ್ಲೋ ನಮ್ಮ ಅಣ್ಣಾವ್ರು ಮತ್ತು ರಜನೀಕಾಂತ್ ನಂಥ ಸರಳಜೀವಿಗಳು ಮಾತ್ರ ಸಹಜವಾಗಿ ಕಾಣಸಿಗುತ್ತಾರೆ.
ಒಬ್ಬ ಕಲಾವಿದ ಹೀರೋ ಆಗೋದೇ ಒಂದು ಸಾಹಸ. ಅಂಥದ್ರಲ್ಲಿ 5 ದಶಕಗಳ ಕಾಲ ಮಾಸ್ ಹೀರೋ ಆಗಿ ಉಳಿಯುವುದು, ಬೆಳೆಯುವುದು, ಚಿತ್ರೋದ್ಯಮವನ್ನು ಬೆಳೆಸುವುದು, ಕೋಟಿ ಕೋಟಿ ಬಂಡವಾಳದ ಆಧಾರವಾಗಿ ಸಾವಿರಾರು ಮಂದಿಯ ಉದ್ಯೋಗಕ್ಕೆ ಕಾರಣವಾಗೋದು ಅಚ್ಚರಿ.
ರಜನೀಕಾಂತ್ ಆ ಕಾಲದ ಹೀರೋಗಳಿಂದ ಆರಂಭವಾಗಿ ಈ ಕಾಲದ ಹೀರೋಗಳ ತನಕ ಎಲ್ಲರಿಗೂ ಸಮಾನಸ್ಪರ್ಧಿಯಾಗಿದ್ದಾರೆ. ತಮ್ಮ ಸಿನಿಮಾದಲ್ಲಿ ಬಾಲನಟನಾಗಿದ್ದ ಹುಡುಗ ಹೃತಿಕ್ ರೋಶನ್. ಇಂದು ಅದೇ ಹೃತಿಕ್ ನಾಯಕನಾಗಿರೋ ವಾರ್ 2 ಎದುರು ಕೂಲೀ ತೆರೆ ಕಾಣುತ್ತಿದೆ. ಇದು ರಜನೀಕಾಂತ್ ಚರಿಷ್ಮಾಕ್ಕೆ ಸಾಕ್ಷಿ.
74 ರ ವಯಸ್ಸಿನ ರಜನೀಕಾಂತ್ ಹಾಡು, ಫೈಟ್, ಸ್ಟೈಲ್, ಎನರ್ಜಿ ಅಭಿನಯಕ್ಕೆ ಇನ್ನು ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆಂದರೆ ಅದು ಸಣ್ಣ ಮಾತಲ್ಲ. ಇಂದಿಗೂ ಇವರನ್ನು ನಿರ್ದೇಶಿಸಲು ಯುವ ನಿರ್ದೇಶಕರು ಕನಸು ಕಾಣುತ್ತಾರೆ. ಇವರ ಸಿನಿಮಾ ನಿರ್ಮಿಸಲು ನಿರ್ಮಾಣ ಸಂಸ್ಥೆಗಳು ಪೈಪೋಟಿಗೆ ಬೀಳುತ್ತೆ. ಇವರ ಸಿನಿಮಾ ನೋಡಲೆಂದೇ ಹೆಸರಾಂತ ಸಂಘ ಸಂಸ್ಥೆಗಳು ಸಂಬಳಸಹಿತ ಸಾರ್ವಜನಿಕ ರಜೆ ಘೋಷಿಸುತ್ತೆ ಎಂದರೆ ಇವರ ಫ್ಯಾನ್ ಬೇಸ್ ಅದ್ಯಾವ ಮಟ್ಟದ್ದು ಎಂಬುದು ಅರ್ಥವಾಗುತ್ತೆ.
ಮೈತುಂಬಾ ಆರೋಗ್ಯ ಸಮಸ್ಯೆಗಳಿದ್ದರೂ, ತಲೆಮಾರುಗಳು ತಿನ್ನುವಷ್ಟು ಸಂಪಾದಿಸಿದ್ದರೂ, ರಜನೀ ಇನ್ನು ನಟಿಸುತ್ತಾರೆಂದರೆ ಅದು ಅಭಿಮಾನಿಗಳ ಮೇಲಿನ ಅಭಿಮಾನ, ಮತ್ತು ಕಲೆಯ ಕಡೆಗಿನ ಸೆಳೆತ, ಗೌರವವೇ ಕಾರಣ. ತಮಗಾಗಿ ದುಡಿಯಬೇಕಾದ ಅನಿವಾರ್ಯತೆ ಇರದಿದ್ದರೂ, ಚಿತ್ರೋದ್ಯಮಕ್ಕಾಗಿ ದುಡಿವ ವ್ಯಕ್ತಿ…
ರಜನೀಕಾಂತ್ ಸ್ಕ್ರೀನ್ ಪ್ರಸೆನ್ಸ್ unmatchable. ರಜನೀಕಾಂತ್ ಎನರ್ಜಿ unbelievable.
ರಜನೀಕಾಂತ್ ಕ್ರೇಜ್ universal.
ವರದಿ : ಆಂಟೋನಿ
